History of Putthige Sri Somanatheshwara Temple
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಪುತ್ತಿಗೆ ಗ್ರಾಮದಲ್ಲಿ ಸಪರಿವಾರವಾಗಿ ಕಂಗೊಳಿಸುತ್ತಿರುವ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಧರ್ಮ- ಆಧ್ಯಾತ್ಮಿಕ ಆಧಾರಿತವಾಗಿ ಒನಪದಕ್ಕೆ ಶ್ರಧ್ದಾಸ್ಥಾನವಾಗಿದೆ. ತುಳುನಾಡಿನ ಪ್ರತಿಷ್ಠಿತ ಅರಸು ಮನೆತನವಾದ ಚೌಟರಿಂದ ಸ್ಥಾಪಿತವಾಗಿ ಐತಿಹಾಸಿಕ ಮಹತ್ವವನ್ನು ಪಡೆದು ಸರಿಸುಮಾರು 900 ವರ್ಷಗಳ ವೈಭವದ ಇತಿಹಾಸವನ್ನು ವರ್ಣರಂಜಿತವಾಗಿ ಪಡೆದುಕೊಂಡಿದೆ. ತಮ್ಮ ಅರಸೊತ್ತಿಗೆಯನ್ನು ಉಳ್ಳಾಲದಿಂದ ಮೂಡಬಿದಿರೆಗೆ ಸ್ಥಳಾಂತರಗೊಳಿಸಿದ ಚೌಟರು ನಿತ್ಯ ಸಕಾಲದಲ್ಲಿ ಶ್ರೀ ಸೋಮನಾಥ ದೇವರ ಪ್ರಸಾದವನ್ನುಸ್ವೀಕರಿಸಲು ನಿರಾಳವಾಗುವಂತೆ ದೇವಾಲಯ ನಿರ್ಮಾಣ ಮಾಡುವ ಸಂಕಲ್ಪ ಹೊಂದಿದ್ದರು. ಹುಲಿ-ದನವು ಜೊತೆಗೆ ವಿಹರಿಸುತ್ತಿದ್ದ ದೃಶ್ಯವು ಈ ಸನ್ನಿಧಾನದಲ್ಲಿ ಪ್ರತ್ಯಕ್ಷವಾಗಿ ಗೊಚರಿಸಿ ದೇವಾಲಯ ನಿರ್ಮಿಸಿದರು ಎಂಬುದು ಪ್ರತೀತಿ.
ನಾಗು ನದಿಯ ತಟದಲ್ಲಿ ವಿಶಾಲವಾದ ಮೂರು ಸುತ್ತಿನ ಪ್ರಾಕಾರ(or ಪ್ರಾಂಗಣ)ವನ್ನು ಹೊಂದಿರುವ ದೇವಳದ ಒಳಪ್ರಾಕಾರದಲ್ಲಿ ಕೇಂದ್ರಪ್ರಾಯವಾಗಿ ಪಶ್ಚಿಮಾಭಿಮುಖ ಸ್ಥಿತ ದ್ವಿದಳ ಗರ್ಭಗುಡಿಯಲ್ಲಿ ಕರುಣಾಪೂರ್ಣರಾದ ಶ್ರೀ ಸೋಮನಾಥ ದೇವರ ದಿವ್ಯ- ಸುಂದರ ಸಂಶೋಭಿತ ಲಿಂಗವಿದೆ. ನಿತ್ಯನೂತನನಾದ ಶ್ರೀ ದೇವನು ಭಕ್ತಕೋಟಿಯನ್ನು ಆಕರ್ಷಿಸುವ ಪರಿಯು ವಿಶಿಷ್ಠವಾದುದು ಎಂಬುದು ಭಕ್ತರ ಅಭಿಪ್ರಾಯ. ಶ್ರೀ ದೇವರ ಬಲಭಾಗದಲ್ಲಿ ಷಡ್ಭುಜ ಶ್ರೀ ಮಹಿಷಮರ್ದಿನಿ ಅಮ್ಮನವರ ಶಾಂತಗಂಭೀರ ರೂಪದ ಆಕರ್ಷಣೀಯ ವಿಗ್ರಹವಿದೆ. ಅಂತೆಯೇ ಎಡಭಾಗದಲ್ಲಿ ಪ್ರಥಮ ಪೂಜಿತ ಶ್ರೀ ಮಹಾಗಣಪತಿ ದೇವರ ಅಭಯಪ್ರದವಾದ ವಿಗ್ರಹವಿದೆ. ಒಳಪ್ರಾಂಗಣದ ವಾಯವ್ಯ ದಿಕ್ಕಿನಲ್ಲಿ ಲಕ್ಷ್ಮಿ ನರಸಿಂಹ ಮತ್ತು ಚಂದ್ರನಾಥೇಶ್ವರ ದೇವರ ಸಂಕಲ್ಪವಿದೆ. ನೈರುತ್ಯ ದಿಕ್ಕಿನಲ್ಲಿ ಪ್ರಸಿಧ್ಧ ಪಂಚಧೂಮಾವತಿ ದೈವದ ಗುಡಿಯಿದೆ. ಮಧ್ಯಪ್ರಾಂಗಣದ ಪೂರ್ವ ದಿಕ್ಕಿನಲ್ಲಿ ಕರಿಯಮಾಲ ದೈವದ ಸನ್ನಿಧಾನವಿದ್ದರೆ , ಹೊರಪ್ರಾಂಗಣದ ಪಶ್ಚಿಮದಲ್ಲಿ ರಕ್ತೇಶ್ವರಿ ಗುಡಿಯಿದೆ.
ಹೀಗೆ ಹಲವಾರು ವೈಶಿಷ್ಟ್ಯಗಳನ್ನು, ಪ್ರಾಕೃತಿಕ ಸೌಂದರ್ಯವನ್ನೊಳಗೊಂಡು ಕ್ಷೇತ್ರವು ಶೋಭಾಯಮಾನವಾಗಿ ಬೆಳಗುತ್ತಿದೆ.
|ಐತಿಹಾಸಿಕ ಮಾಹಿತಿ|
ತುಳುನಾಡಿನ ಪ್ರತಿಷ್ಠಿತ ಅರಸು ಮನೆತನಗಳಲ್ಲಿ ಚೌಟರು ಪ್ರಮುಖರು . ಇವರು ಮೂಲತಃ ಉಳ್ಳಾಲ ಸಮೀಪದ ಸೋಮೇಶ್ವರದಲ್ಲಿ ರಾಜಧಾನಿಯನ್ನು ಹೊಂದಿದ್ದು , ಹನ್ನೆರಡನೇ ಶತಮಾನದಲ್ಲಿ ತಮ್ಮ ರಾಜಧಾನಿಯನ್ನು ಮೂಡಬಿದಿರೆಗೆ ಸ್ಥಳಾಂತರಿಸಿದರು . ಆವೇಳೆ ಚೌಟರ ಅರಸರಾಗಿದ್ದವರು ವರದಯ್ಯ ದೇವರಾಯ ಚೌಟರು . ಶಾಲಿವಾಹನ ಶಕ ವರ್ಷ 1177ನೇ
ಶೋಭಕೃತ ಸಂವತ್ಸರದ ವೈಶಾಖ ಶುದ್ಧ 7 ರಂದು ಅಂದರೆ ಕ್ರಿ. ಶ . 1255 ರಲ್ಲಿ ದೇವಾಲಯ ನಿರ್ಮಾಣ ಆರಂಭಿಸಿದರು ಎಂಬ ನಿಖರವಾದ ಐತಿಹಾಸಿಕ ದಾಖಲೆಯು ಲಭ್ಯವಿದೆ .
ಚೌಟರ ಅಧಿಕಾರ ವ್ಯಾಪ್ತಿಯಲ್ಲಿ ಮಹತೋಭಾರ ಮಾನ್ಯತೆಯೊಂದಿಗೆ ಸೀಮೆ – ಮಾಗಣೆ ದೇವರಾಗಿ “ಶ್ರೀ ಸೋಮನಾಥ ದೇವರು” ಪರಿಗ್ರಹಿಸಲ್ಪಡುತ್ತಾರೆ . ಇದೇ ಕಾಲದಲ್ಲಿ ಕ್ಷೇತ್ರದ ದೈವವಾಗಿ ಪಂಚ ಧೂಮಾವತಿಯನ್ನು ದೇವಾಲಯದಿಂದ ಪೂರ್ವಕ್ಕೆ ಅನತಿದೂರದಲ್ಲಿ ನೆಲೆಗೊಳಿಸಲಾಗಿತ್ತು . ಈ ದೈವವೂ ಮಾಗಣೆಯಲ್ಲಿ ವಿಶೇಷ ನಂಬಿಕೆಯಿಂದ ಆರಾಧಿಸಲ್ಪಡುತ್ತಿದೆ .
ಒಂದನೇ ತಿರುಮಲರಾಯರು
( ಕ್ರಿ . ಶ . 1245 – 1283) ಶಾ . ಶ . 1177 ನೇ ರಾಕ್ಷಸ ಸಂ| ರದ ವೈಶಾಖ ಶು| ೭ ರಲ್ಲಿ ಪುತ್ತಿಗೆಯಲ್ಲಿ ಸೋಮನಾಥ ದೇವಸ್ಥಾನ ಪ್ರತಿಷ್ಠಾಪಿಸಿದರು ಹಾಗೂ ಪಂಚಧೂಮಾವತಿ ದೈವಕ್ಕೆ ಗುಡಿ ಕಟ್ಟಿಸಿದರು ಎಂಬ ಇನ್ನೊಂದು ಚರಿತ್ರೆಯ ಉಲ್ಲೇಖವೂ ದೊರೆಯುತ್ತದೆ . ಏನಿದ್ದರೂ ಚೌಟರ ಪರಂಪರೆಯ ಘನತೆಯ ದೇವಾಲಯವು ಇದಾಗಿದೆ . ಚೌಟರು ತಮ್ಮ ವಾಸ್ತವ್ಯಕ್ಕಾಗಿ ಕ್ರಿ . ಶ . 1643 ರಲ್ಲಿ ಮೂಡಬಿದಿರೆಯಲ್ಲಿ ಅರಮನೆಯನ್ನು ಕಟ್ಡಿಸಿ ಸ್ಥಿರ ವಾಸ್ತವ್ಯ ಹೊಂದಿದರು ಎಂದು ಚರಿತ್ರೆ ವಿವರಿಸುತ್ತದೆ .
ಉಳ್ಳಾಲದಲ್ಲಿ ಸೋಮನಾಥ ದೇವರಿಗೆ ಪೂಜೆಮಾಡುತ್ತಿದ್ದ ಅರ್ಚಕರ ಒಂದು ಶಾಖೆಯನ್ನು ಅಲ್ಲಿಂದ ತರಿಸಿ ಪುತ್ತಿಗೆಯಲ್ಲಿ ಪೂಜೆಗೆಂದು ನೇಮಿಸಿದ ಚೌಟರು ದೇವಾಲಯದ ವಿನಿಯೋಗಗಳಿಗಾಗಿ ಉತ್ತಾರವನ್ನು ಬಿಟ್ಟಿದ್ದರು .ಕ್ರಿ . ಶ . ಹದಿನೈದನೇ ಶತಮಾನದಲ್ಲಿ ದೇವಾಲಯಕ್ಕೆ ಮಾಡಿದ ದಾನದ ಉಲ್ಲೇಖವಿರುವ ಶಾಸನವೊಂದು ದೇವಾಲಯದಲ್ಲಿದೆ .
|ಸ್ಥಳನಾಮ|
ತಮ್ಮ ಅರಸೊತ್ತಿಗೆಯನ್ನು ಉಳ್ಳಾಲದಿಂದ ಮೂಡಬಿದಿರೆಗೆ ಸ್ಥಳಾಂತರಿಸಿದ ಚೌಟರು ನಿತ್ಯ , ಸಕಾಲದಲ್ಲಿ ಸೋಮನಾಥ ದೇವರ ಪ್ರಸಾದವನ್ನು ಸ್ವೀಕರಿಸಲು ನಿರಾಳವಾಗುವಂತೆ ಸೋಮನಾಥ ದೇವಾಲಯವನ್ನು ಮೂಡಬಿದಿರೆಯಲ್ಲಿ ನಿರ್ಮಿಸಿದರು . ದನ – ಹುಲಿಯು ಒಟ್ಟಿಗೆ ವಿಹರಿಸುತ್ತಿದ್ದ ಸತ್ಯದ ಸನ್ನಿಧಾನದಲ್ಲಿ ದೇವಾಲಯವಾಯಿತು ಎಂಬ ಜನಜನಿತ ಮಾಹಿತಿಯ ಆಧಾರದಲ್ಲಿ “ಪುತ್ತಿಗೆ” ಎಂಬ ಸ್ಥಳನಾಮ ಹೇಗೆ ಬಂತು .
ನೂತನ ದೇವಾಲಯ ನಿರ್ಮಾಣವಾಗುವವರೆಗೆ ಜನವಸತಿ ಇಲ್ಲದೇ ಇದ್ದು ಹೊಸತಾಗಿ ದೇವಳ ಕೇಂದ್ರಿತವಾಗಿ ಒಂದು ವಾಸ್ತವ್ಯ ಆರಂಭ ವಾಯಿತು ತಾನೆ ?
ಸ್ಥಳನಾಮ ಸಂಶೋಧಕರು ಹೇಳುವಂತೆ ‘ಪುತ್ತಿಗೆ’ ಎಂದರೆ ಹೊಸತಾಗಿ ಜನವಸತಿಗೆ ಒಳಪಟ್ಟ ಪ್ರದೇಶ . ಪುತ್ = ಹೊಸತು . ‘ಪುದಿ’ ಎಂಬ ಶಬ್ದದಿಂದ ಬಂದದ್ದು . ಪುತ್>ಪುದಿ = ಹೊಸತು . ದಂತಕತೆ ಮತ್ತು ಈ ಸ್ಥಳನಾಮ ಸಂಶೋಧಕರ ಅಭಿಪ್ರಾಯ ಪರಸ್ಪರ ಪೂರಕವಾಗಿದ್ದು ಪರಿಗ್ರಹಿಸುವಂತಿದೆ .
ಪೊಳಲಿಯಂತಹ ಕ್ಷೇತ್ರದ ಮಹೋತ್ಸವಕ್ಕೆ ದಿನ ನಿರ್ಧಾರವಾಗುವುದು ಪುತ್ತಿಗೆ ದೇವಾಲಯದಲ್ಲಿ . ಇಂತಹ ಹಲವು ವಿಶೇಷಗಳು ಮತ್ತು ಪ್ರಾಧಾನ್ಯಗಳು ಪುತ್ತಿಗೆ ದೇವಾಲಯಕ್ಕಿದೆ .
| ದೇವಾಲಯ|
ದೇವಾಲಯವು ಪಶ್ಚಿಮಾಭಿಮುಖವಾಗಿದೆ. ಮಧ್ಯಮಗಾತ್ರದ ರಚನೆಯಾದರೂ ಸಮಗ್ರ ದೇವಾಲಯ ಸಮುಚ್ಚಯವು ಮೂರು ಸುತ್ತುಗಳನ್ನು ಹೊಂದಿ ವಿಶಾಲಕ್ಕೆ ಹರಡಿಕೊಂಡಿದೆ . ಒಳ ಪ್ರಾಕಾರದಲ್ಲಿ ಚತುರಸ್ರ ಆಕಾರದ ಗರ್ಭಗುಡಿ ,
ತೀರ್ಥಮಂಟಪಗಳಿವೆ . ಹೊರಾಂಗಣ ಶಾಸ್ತ್ರೀಯವಾದ ರಚನೆ . ಸಾಮಾನ್ಯವಾಗಿ ದೇವಳ ಸಮುಚ್ಚಯವು ಇಲ್ಲಿಗೆ ಮುಗಿಯುತ್ತದೆ .ಆದರೆ ಪುತ್ತಿಗೆಯಲ್ಲಿ ಮೂರನೇ ಸುತ್ತು ಪ್ರತೇಕವಿದ್ದು ರಾಜಾಂಗಣ ಎಂದು ಗುರುತಿಸಲ್ಪಡುತ್ತದೆ .ಈ ರಾಜಾಂಗಣವು ದೇವಸ್ಥಾನಕ್ಕೆ ಭವ್ಯತೆಯನ್ನು ಮತ್ತು ವಿಶಿಷ್ಟ ನೋಟವನ್ನು ಒದಗಿಸುತ್ತದೆ .
ಗರ್ಭಗುಡಿಯಲ್ಲಿ ಸೋಮನಾಥ ಲಿಂಗವಿದೆ , ಹನ್ನೊಂದನೇ ಶತಮಾನದ ಕಂಚಿಯ ಬಲಿಮೂರ್ತಿ ಇದೆ . ಇದು ಜಟಾಮುಕುಟಧಾರಿಯಾದ ಸದಾಶಿವ ಎಂದು ಗುರುತಿಸಲಾಗಿದೆ . ದೇವಕೋಷ್ಟದಲ್ಲಿ ಉತ್ತರ , ದಕ್ಷಿಣ ಪಾರ್ಶ್ವಗಳಲ್ಲಿ ಹದಿಮೂರನೇ ಶತಮಾನದ ನಿರ್ಮಿತಿಯಾದ ಮಹಿಷಮರ್ದಿನಿ ವಿಗ್ರಹವಿದೆ .ಇದು ಷಡ್ಬಾಹು .ಅರ್ಧ ಮೀಟರ್ ಎತ್ತರವಿದೆ .ಒಳ ಸುತ್ತಿನ ವಾಯುವ್ಯದಲ್ಲಿ ನರಸಿಂಹ ದೇವರ ಸಂಕಲ್ಪವಿದೆ . ಮೂರನೇ ಸುತ್ತಿನ ದ್ವಾರದ ಬಳಿ ರಕ್ತೇಶ್ವರಿ ಸನ್ನಿಧಾನವಿದೆ .
ನೆಲ್ಲಿಗುಡ್ಡೆ ಸಮೀಪ ದೇವಾಲಯಕ್ಕೆ ಸಂಬಂಧಿಸಿದ ಬ್ರಹ್ಮಸ್ಥಾನವೊಂದಿದೆ .ಇದನ್ನು ಉಮೆಗುಂಡಿ ಬ್ರಹ್ಮಸ್ಥಾನ ಎಂದು ಗುರುತಿಸಲಾಗುತ್ತದೆ .ಇದು ಪಂಚದೈವಸ್ಥಾನ ಇತ್ತೀಚೆಗೆ ಜೀರ್ಣೋದ್ಧಾರವಾಗಿದೆ .
ಹದಿನೈದು ದಿನಗಳ ವಾರ್ಷಿಕ ನಡಾವಳಿ , ನಿತ್ಯ ಪೂಜೆ , ಪಂಚಪರ್ವಾದಿಗಳು ಯಥಾ ಶಾಸ್ತ್ರೀಯವಾಗಿ ನೆರವೇರುತ್ತಿವೆ . ಉತ್ಸವಾದಿಗಳ ಸಂಭ್ರಮಕ್ಕಾಗಿ ರಥ ಮುಂತಾದ ವಾಹನಗಳೂ ಇವೆ .
ದೇವಾಲಯದ ಹೊರಗೆ ಪೂರ್ವದಲ್ಲಿ ರಾಜಾಂಗಣದಲ್ಲಿ ಸರೋವರವಿದೆ . ಪ್ರವೇಶಕ್ಕಾಗಿ ಗೋಪುರವಿದೆ ಇದು ಅರಮನೆಯಿಂದ ದೇವಾಲಯಕ್ಕೆ ಬರುವ ನೇರದಾರಿಯಾಗಿದೆ . ಪಶ್ಚಿಮದ ಪ್ರವೇಶ ದ್ವಾರದ ಎದುರು ಕಟ್ಟೆಯೊಂದಿದೆ ಅಲ್ಲೆ ಜಾತಿ ವೈರತ್ವ ಮರೆತು ಒಡನಾಡಿದ ಹುಲಿ – ದನಗಳ ಸಂಕೇತಿಕ ಪ್ರತಿಮೆಗಳಿವೆ .ಇದು ಒಂದು ಕಾಲ – ಸಂದರ್ಭ – ಮನೋಧರ್ಮಗಳ ನೆನಪಿಗಾಗಿ ನಿರ್ಮಿಸಲಾಗಿದೆ . ವಾಯುವ್ಯದಲ್ಲಿ ಪುರಾತನ ನಾಗ ಸಂಕಲ್ಪವಿದೆ .ದೇವಳ ಹೀಗೆ ಭವ್ಯವಾಗಿದೆ .